Wednesday, January 21, 2009

ಧರ್ಮವೆಂಬ ಅಫೀಮು ಮತ್ತು ಬುದ್ಧನ ನಗು.

ಕಳೆದ ಕೆಲವು ದಿನಗಳಿಂದ ಕಲ್ಬುರ್ಗಿಯಲ್ಲೆಲ್ಲಾ ಬುದ್ಧವಿಹಾರದ ರೂವಾರಿ ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆಯೇ ಮಾತು. ಮುಖ್ಯಮಂತ್ರಿಯಿಂದ ರಾಷ್ಟ್ರಪತಿಯವರೆಗೆ , ಬಿಕ್ಕುವಿನಿಂದ ದಲೈಲಾಮವರೆಗೆ ಎಲ್ಲರೂ ಖರ್ಗೆಯವರನ್ನು ಹೊಗಳಿದ್ದೇ ಹೊಗಳಿದ್ದು. ಇಂಥ ವ್ಯಕ್ತಿ ಮುಖ್ಯಮಂತ್ರಿಯಾಗಲಿಲ್ಲವಲ್ಲ ಎಂದು ಪರಿತಪಿಸಿದವರೂ ಉಂಟು.
ಇನ್ನೂ ಬುದ್ಧವಿಹಾರ ನಿರ್ಮಾಣ ಹಂತದಲ್ಲಿದ್ದಾಗ ಅಲ್ಲಿಗೆ ಒಮ್ಮೆ ಭೇಟಿ ನೀಡಿದ್ದೆ. ನಿಜಕ್ಕೂ ಅದ್ಭುತವಾದ ನಿರ್ಮಾಣ. ಮೊಲದ ಬಿಳುಪಿನ ಅಮೃತಶಿಲೆ, ಕಡುಗಪ್ಪು ಬಣ್ಣದ ಬುದ್ಧ ಪ್ರತಿಮೆ ಎಲ್ಲವೂ ಬಹಳವಾಗಿ ಆಕರ್ಷಿಸಿದವು. ಯಾರು ಕಟ್ಟಿಸುತ್ತಿರುವುದಿದನ್ನು ಎಂದು ಸೆಕ್ಯುರಿಟಿಯವನನ್ನು ಕೇಳಿದಾಗ ಖರ್ಗೆ ನೇತ್ರತ್ವದ ಸಿದ್ಧಾರ್ಥ ಟ್ರಸ್ಟ್ ಎಂದರಿವಾಗಿ ಅಲ್ಲಿಯವರೆಗಿನ ಖುಷಿಯೆಲ್ಲಾ ಮರೆಯಾಗಿ ಕಲಬುರ್ಗಿಯ ಚಿತ್ರಣ ಕಣ್ಣ ಮುಂದೆ ಬಂತು.
ಖರ್ಗೆ ಮತ್ತು ಧರ್ಮಸಿಂಗ್ ತಮ್ಮ ಜೀವಿತಾವಧಿಯ ಬಹುಭಾಗ ಶಾಸಕರಾಗಿ ಆಯ್ಕೆಯಾಗಿದ್ದಾರೆ, ಖರ್ಗೆ ಈಗಲೂ ಶಾಸಕರೇ. ಇಬ್ಬರೂ ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ. ಜೇವರ್ಗಿಯ ಬಸ್ಸು ನಿಲ್ದಾಣವನ್ನೊಮ್ಮೆ ನೋಡಿದರೆ ಧರ್ಮಸಿಂಗರ ಕಾರ್ಯವೈಖರಿ ತಿಳಿಯುತ್ತದೆ. ಮಾಜಿ ಮುಖ್ಯಮಂತ್ರಿಯ ಮೇಲೆ ಕೋಪ ಜಿಗುಪ್ಸೆ ಬರದಿದ್ದರೆ ಮನೋವೈದ್ಯರನ್ನು ಭೇಟಿಯಾಗುವುದು ಒಳಿತು .
ತಮ್ಮ ಹೆಸರು ಶಾಶ್ವತವಾಗಿಸುವ ಉದ್ದೇಶವೋ ಅಥವಾ ನಿಜವಾಗಲೂ ಧಾರ್ಮಿಕ ಉದ್ದೇಶದಿಂದ ಕಟ್ಟಿಸಿದ್ದಾರೋ ಹೇಳುವುದು ಕಷ್ಟ. ಅಷ್ಟು ದೊಡ್ಡ ಕಟ್ಟಡವನ್ನು ಕಟ್ಟಿಸಲು ವಹಿಸಿದ ಕಾಲು ಪ್ರತಿಶತ: ಆಸಕ್ತಿಯನ್ನು ಇಡೀ ಕಲ್ಬುರ್ಗಿಯಲ್ಲದಿದ್ದರೂ ಜಿಲ್ಲಾ ಆಸ್ಪತ್ರೆಯ ಅಭಿವೃದ್ಧಿಗೆ ತೋರಿಸಿದ್ದರೂ....... ಬಿಡಿ ನಾವು ಸರಿ ಇಲ್ಲ . ಧರ್ಮದ ಹೆಸರಲ್ಲಿ ರಾಜಕೀಯ ಮಾಡುವವರಿಗೆ, ನಕಲಿ ಜಾತ್ಯತೀತರಿಗೆ; ಮಂದಿರ, ಮಸೀದಿ, ಚರ್ಚು, ಮತಾಂತರ,ಇಸ್ಲಾಂ ಹೊಸದಾಗಿ ಹಿಂದೂ ಭಯೋತ್ಪಾದನೆಯ ವಿಷಯವಾಗಿ ನಮ್ಮನ್ನು ಉದ್ರೇಕಿಸುವವರಿಗೆ ನಮ್ಮ ಮೊದಲ ಆದ್ಯತೆ .

No comments:

ChatBox

Related Posts with Thumbnails