" ಕರ್ನಾಟಕದಲ್ಲಿ ಈಗ ನಕ್ಸಲರು ಇಲ್ಲ. ನಕ್ಸಲ್ ಚಟುವಟಿಕೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿದ್ದೇವೆ. ನಕ್ಸಲ್ ಪೀಡಿತ ಪಟ್ಟಿಯಿಂದ ಕರ್ನಾಟಕ ಹೊರಕ್ಕೆ." - ಗೃಹ ಸಚಿವ ವಿ.ಎಸ್.ಆಚಾರ್ಯ.
ನಕ್ಸಲರೆಂದರೆ ಕಾಡಿನಲ್ಲಿದ್ದು ಬಂದೂಕು ಹಿಡಿದಿರುವವರು ಮಾತ್ರ ಎಂದು ತಿಳಿದವರಿಂದ ಮಾತ್ರ ಈ ರೀತಿಯ ಹೇಳಿಕೆ ಬರಲು ಸಾಧ್ಯ. ಹೌದು , ಬಹಳಷ್ಟು ಜನ ಪ್ರಮುಖ ನಾಯಕರ ಬಂಧನದಿಂದ ರಾಜ್ಯದಲ್ಲಿ ನಕ್ಸಲರ ಸಂಖ್ಯೆ ಕ್ಷೀಣಿಸಿದೆ. ಆದರೆ ಕರ್ನಾಟಕ 'ನಕ್ಸಲ್ ಮುಕ್ತ'ರಾಜ್ಯವಾ?.
ಮೊದಲನೆಯದಾಗಿ ನಕ್ಸಲ್ ಚಳುವಳಿ ಭಾರತದಾದ್ಯಂತ ವ್ಯಾಪಿಸಲು ಮೂಲ ಕಾರಣ ದೇಶದ ಆಡಳಿತದಲ್ಲಿನ ಲೋಪದೋಷಗಳು, ರಾಜ್ಯಕ್ಕೂ ಅದು ಅನ್ವಯವಾಗುತ್ತೆ. ಒಂದೊಮ್ಮೆ ನಕ್ಸಲ್ ಹೋರಾಟ ಸಂಪೂರ್ಣವಾಗಿ ನಿಲ್ಲಬೇಕಾದರೆ ಸರಕಾರಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕು. ಆದರೆ ಅದು ಆಗುತ್ತಿದೆಯೇ? ಕರ್ನಾಟಕದ ಉದಾಹರಣೆಯನ್ನೇ , ಅದರಲ್ಲೂ ಕೇವಲ ಈಗಿನ ಸರಕಾರದ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಬಿ.ಜೆ.ಪಿ. ಸರಕಾರ ಅಧಿಕಾರಕ್ಕೆ ಬಂದ ನಂತರ ಕೊಟ್ಟಿರುವ ಆಡಳಿತ ಜನರಲ್ಲಿ ಭರವಸೆ ಮೂಡಿಸುವ ಹಾಗಿದೆಯಾ? ಗಣಿ ಮಾಫಿಯಾದವರ ಅಟ್ಟಹಾಸ , ಮಂತ್ರಿಗಳ ಭ್ರಷ್ಟಾಚಾರ, ಹಾದರ, ಕೋಮುಗಲಭೆಗಳು, ಎಲ್ಲಾ ಕೋಮಿನ ಮೂಲಭೂತವಾದಿಗಳ ಅಟ್ಟಹಾಸ, ಉತ್ತರ ಕರ್ನಾಟಕದಲ್ಲಾದ ಪ್ರವಾಹ ಸಂತ್ರಸ್ತರಿಗೆ ಎಲ್ಲಾ ಪಕ್ಷದವರು ಮಾಡಿದ ಮಾಡುತ್ತಿರುವ ಮೋಸ - ಜನರು ಈ ಕಾರಣಕ್ಕಾಗಿ 'ಪ್ರಜಾ ಪ್ರಭುತ್ವದಲ್ಲಿ' ನಂಬಿಕೆ ಇಡಬೇಕಾ? ಅಲ್ಲಿಗೂ ಜನರು ಸರಕಾರಕ್ಕೆ ಬೆಂಬಲ ಕೊಡುವಂತೆ ಇದ್ದಾರೆ ಎಂಬುದಕ್ಕೆ ಕಾರಣ ಅವರಿಗೆ ಮತ್ಯಾವ ಪರ್ಯಾವವೂ ಕಾಣದಿರುವುದೇ ಆಗಿದೆ.
ಸದ್ಯದ ಮಟ್ಟಿಗೆ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಹಿನ್ನೆಡೆ ಅನುಭವಿಸಿರಬಹುದು. ಆದರೆ ರಾಜ್ಯದ ಜನರಿಗೆ ಒಂದು ಸಂದೇಶ ಮುಟ್ಟಿದೆ. ನಮ್ಮನ್ನು ಸರಕಾರ ನಿರ್ಲ್ಯಕ್ಷಿಸುತ್ತಿದ್ದಾಗ ನಕ್ಸಲ್ ಚಳುವಳಿ ಮಾತ್ರ ನಮ್ಮ ಸಮಸ್ಯೆಗಳಿಗೆ ಉತ್ತರವಾಗಬಲ್ಲದು ಎಂದು. ಇದು ಮಲೆನಾಡಿನಲ್ಲಿ ನಕ್ಸಲರಿಗೆ ಸಿಕ್ಕ ಗೆಲುವು. ಸರಕಾರದ ಅಧಿಕಾರಿಗಳೇ ಹೇಳಿರುವಂತೆ ಕೆಲವು ಉತ್ತಮ ಅಧಿಕಾರಿಗಳ ನೆರವಿನಿಂದ ಮಲೆನಾಡಿನಲ್ಲಿ ನಕ್ಸಲ್ ಪ್ರಭಾವ ತಗ್ಗಿದೆಯಂತೆ. ಅಲ್ಲಿಗೆ ಉತ್ತಮ ಕೆಲಸ ಮಾಡುವ ಅಧಿಕಾರಿಗಳು ನಮ್ಮ ಜಾಗಕ್ಕೆ ಬರಬೇಕಾದರೆ ಮತ್ತು ಅಧಿಕಾರಿಗಳು ನಮ್ಮ ಪ್ರದೇಶದಲ್ಲಿ ಉತ್ತಮ ಕೆಲಸ ಮಾಡಬೇಕಾದರೆ ಒಂದಷ್ಟು ದಿನಗಳ ಮಟ್ಟಿಗಾದರೂ ಅಲ್ಲಿನ ಜನರು ನಕ್ಸಲ್ ಹೋರಾಟದಲ್ಲಿ ಭಾಗವಹಿಸಬೇಕೆಂದು ಸರಕಾರವೇ ಪರೋಕ್ಷವಾಗಿ ತಿಳಿಸಿದಂತಾಯಿತು.
ಉಳಿದಂತೆ ರಾಜ್ಯದ ಬಹುತೇಕ ಶಾಂತ ರೀತಿಯ ಹೋರಾಟಗಳನ್ನು ರಾಜ್ಯ ಸರಕಾರ ತನ್ನ ಕುತಂತ್ರದಿಂದ, ಅಧಿಕಾರದ ಬಲಪ್ರಯೋಗದಿಂದ ಹತ್ತಿಕ್ಕಿರುವುದನ್ನು ಜನರು ನೋಡಿದ್ದಾರೆ. ಇತ್ತೀಚಿನ ಉದಾಹರಣೆ ಗುಲ್ಬರ್ಗದ ಅಣು ವಿದ್ಯುತ್ ಸ್ಥಾವರ.
ಅಭಿವೃದ್ಧಿಯ ಹೆಸರಿನಲ್ಲಿ ಸಾವಿರಾರು ಎಕರೆಗಳನ್ನು ಕೃಷಿಯೇತರ ಚಟುವಟಿಕೆಗಳಿಗೆ ಕೊಡಲು ಹೊರಟಿದೆ ನಮ್ಮ ಸರಕಾರ. ನಕ್ಸಲ್ ಹೋರಾಟವನ್ನು ಬಿಟ್ಟು ಉಳಿದ ಯಾವುದೇ ಹೋರಾಟವನ್ನು ಅಲ್ಲಿನ ಜನ ನೆಚ್ಚಿಕೊಂಡರೆ ಗುಲ್ಬರ್ಗದ ರೈತರಿಗಾದ ಸ್ಥಿತಿಯೇ ಅವರಿಗೂ ಆಗುವ ಸಾಧ್ಯತೆಗಳು ಅಧಿಕ. ಒಂದೊಮ್ಮೆ ಸರಕಾರ ತನ್ನ ಅಧಿಕಾರದ ಬಲದಿಂದ ಜನರನ್ನು ಬೆದರಿಸಿ ಕೃಷಿಯೋಗ್ಯ ಭೂಮಿಯನ್ನು ವಶಪಡಿಸಿಕೊಂಡರೆ ನಂತರದ ದಿನಗಳಲ್ಲಿ ಆಕಾಶದ ಕಡೆ ಮುಖ ಮಾಡುವ ಆಹಾರ ಉತ್ಪನ್ನಗಳ ಬೆಲೆಯ ಬಿಸಿ ಜನರಿಗಿ ಮುಟ್ಟಿದಾಗ ಶುರುವಾಗುವ ಹೋರಾಟವನ್ನು ತಡೆಯಲು ಸರಕಾರದ ಬಳಿ ' ಅಪರೇಷನ್ ಗ್ರೀನ್ ಹಂಟ್' ನಂತಹ ಯೋಜನೆಗಳನ್ನು ಬಿಟ್ಟು ಬೇರೆ ಯೋಚನೆಗಳಿವೆಯೇ?
No comments:
Post a Comment