ಶಾಲಾ ಹುಡುಗಿಯ ಕೊಲೆಯಾಗುವುದು ಯಾರಿಗೂ ಸಂತೋಷ ತರುವ ವಿಚಾರವಲ್ಲ. ಆದರೆ ದೃಶ್ಯಮಾಧ್ಯಮಗಳು ಅದರಲ್ಲೂ ತಮ್ಮನ್ನು ತಾವೇ ಭಾರತ ದೇಶದ ಮಾಧ್ಯಮಗಳೆಂದು ಕರೆದುಕೊಳ್ಳುವ ಆಂಗ್ಲ ಮಾಧ್ಯಮಗಳು ಶಾಲಾ ಹುಡುಗಿಯ ಕೊಲೆಯ ಬಗ್ಗೆ ನಡೆಸಿದ ಕಾರ್ಯಕ್ರಮಗಳು ರೇಜಿಗೆ ಹಾಗಿದ್ದವು. "ಸಂಕ್ಷಿಪ್ತ ಸುದ್ದಿಯ " ಹೆಸರಿನಲ್ಲಿ ಬರಬೇಕಾಗಿದ್ದ ಸುದ್ದಿ ಬಹುತೇಕ ಎಲ್ಲಾ ಮಾಧ್ಯಮಗಳ ಮುಖ್ಯಾಂಶದ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಕಾಣಿಸಿಕೊಂಡಿತು . ಅದರ ಬೆನ್ನಿಗೇ ತಾವು ಮಾಡಿದ್ದು ಸರಿಯಾ? ಎಂಬ ಪ್ರಶ್ನೆಯನ್ನು ತಮಗೇ ಕೇಳಿಕೊಂಡು ನಾವು ಅಷ್ಟು ಆಸಕ್ತಿ ವಹಿಸದೇ ಇದ್ದ ಪಕ್ಷದಲ್ಲಿ ಅಪರಾಧಿಗಳ ಪತ್ತೆಯೇ ಕಷ್ಟವಾಗುತ್ತಿತ್ತು ಎಂದು ಹೇಳಿ ಕೈತೊಳೆದುಕೊಂಡರು .
ಅವರ ಮಾತನ್ನೇ ಒಪ್ಪುವುದಾದರೆ ಅವರಿಂದಲೇ ಈ ಕೊಲೆ ಪ್ರಕರಣ ಇತ್ಯರ್ಥವಾಯಿತು[?], ಸಂತೋಷ .ಆದರೆ ಈ ಕೊಲೆ ನಡೆದ ಸಮಯದ ಆಜುಬಾಜಿನಲ್ಲೇ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕಳ್ಳಭಟ್ಟಿ ದುರಂತ ನಡೆದು ಇನ್ನೂರಕ್ಕೂ ಅಧಿಕ ಮಂದಿ ಮೃತಪಟ್ಟರು. ಇದು ಒಂದು ರೀತಿ ಪ್ರಾಯೋಜಿತ ಕೊಲೆಯೇ . ಅಪರಾಧಿಗಳನ್ನು ಹಿಡಿಯುವಲ್ಲಿ ಸಹಾಯ ಮಾಡುವುದಿರಲಿ ಅವರಿಗೆ ಇದು ಪ್ರಮುಖ ಸುದ್ದಿಯೂ ಆಗಲಿಲ್ಲ. ಪುಂಖಾನುಪುಂಖವಾಗಿ ಸುದ್ದಿ ಪ್ರಸಾರ ಮಾಡಿ ಸರಕಾರದ ಮೇಲೆ ಒತ್ತಡ ಹೇರಲಿಲ್ಲ. ಸತ್ತ ಇನ್ನೂರು ಜನ ವೈದ್ಯರ ಮಕ್ಕಳಾಗಿರಲಿಲ್ಲ , ಅವರದು highprofile ಬದುಕಲ್ಲ ಎಂಬ ಕಾರಣವಾ? ಇನ್ನೂರು ಜನರ ಬದುಕು ಒಬ್ಬ ಶಾಲಾ ಹುಡುಗಿಯ ಬದುಕಿಗಿಂತ ಕಡೆಯಾಗಿ ಹೋಯಿತಾ? ಅವರ ಮಾತನ್ನೇ ನಂಬುವುದಾದರೆ ಕಳ್ಳಭಟ್ಟಿ ದುರಂತದ ಬಗ್ಗೆ ಅವರು ತನಿಖೆ ನಡೆಸಿದ್ದರೆ ಇನ್ನಷ್ಟು ಅಪರಾಧಿಗಳು ಸಿಕ್ಕಿಬಿಳುತ್ತಿದ್ದರೇನೋ?
ಸತ್ತವರು ಅಥವಾ ಸಾಯಿಸಿದವರು highprofile ಸಮಾಜದಿಂದ ಬಂದವರಾಗಿದ್ದಾರೆ ಮಾತ್ರ ಅವರ ವಾಹಿನಿಗಳಲ್ಲಿ ಸ್ಥಾನ. ಈ ವಿಷಯದಲ್ಲಿ ಸ್ಥಳಿಯ ಭಾಷಾ ಪತ್ರಿಕೆಗಳೇ ಮೇಲು. ಪತ್ರಿಕೆಗಳಲ್ಲಿ ಇನ್ನೂ ದೇಶದ ಸಮಸ್ಯೆಗಳೇ ಮುಖ್ಯ ಸ್ಥಾನ ಪಡೆದುಕೊಂಡಿವೆ. ಅವು ಬದಲಾಗದಿರಲೆಂದು ಆಶಿಸೋಣ.
No comments:
Post a Comment